ಅನಿರುದ್ಧ
	ಭಾಗವತಸಿದ್ಧಾಂತದಲ್ಲಿ ವಾಸುದೇವ, ಸಂಕರ್ಷಣ, ಪ್ರದ್ಯಮ್ನ, ಅನಿರುದ್ಧರು ಪರಬ್ರಹ್ಮನ ಅಭಿವ್ಯಕ್ತಿಯ ನಾಲ್ಕು ವ್ಯೂಹಗಳು. ಬ್ರಹ್ಮನ ಪರ ಸ್ವರೂಪ ವಾಸುದೇವ. ಈ ಕಾರಣದಿಂದ, ಸಂಕರ್ಷಣ ಬ್ರಹ್ಮನಿಂದ ಅಭಿವ್ಯಕ್ತವಾದ ಜೀವಾತ್ಮ. ಸಂಕರ್ಷಣನಿಂದ ಪ್ರದ್ಯುಮ್ನನೆಂಬ ಅಂತಃಕರಣ ಸೃಷ್ಟವಾಯಿತು. ಪ್ರದ್ಯುಮ್ನನಿಂದ ಅಹಂಕಾರತತ್ತ್ವವಾದ ಅನಿರುದ್ಧತತ್ತ್ವ ಹುಟ್ಟಿತು. ವಾಸುದೇವ, ಸಂಕರ್ಷಣ, ಪ್ರದ್ಯಮ್ನ ಮತ್ತು ಅನಿರುದ್ಧರಿಗೂ ಬ್ರಹ್ಮನಿಗೂ ಇರುವ ಸಂಬಂಧವನ್ನು ಶರೀರ ಶರೀರಿ ಸಂಬಂಧವೆಂದು ವಿಶಿಷ್ಟಾದ್ವೈತಪ್ರತಿಪಾದಕರಾದ ರಾಮಾನುಜರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಹೇಳಿದ್ದಾರೆ.     			

(ಎಂ.ವೈ.)

	ಅನಿರುದ್ಧ ರುಕ್ಮಿಣಿ-ಕೃಷ್ಣರ ಮೊಮ್ಮಗ. ಪ್ರದ್ಯುಮ್ನ ಹಾಗೂ ರುಕ್ಮವತಿಯರ ಮಗ. ರುಕ್ಮಿಯ ಮೊಮ್ಮಗಳು ರೋಚನೆಯನ್ನು ಮದುವೆಯಾಗಿ ವಜ್ರನೆಂಬ ಮಗನನ್ನು ಪಡೆದನೆಂದು ಭಾಗವತದಲ್ಲೂ ಬಾಣಾಸುರನ ಮಗಳು ಉಷೆ ಇವರ ಹೆಂಡತಿಯೆಂದು ಭಾರತದಲ್ಲೂ ಹೇಳಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ